ಕೆಲರ್, ಹೆಲನ್ ಆಡಮ್ಸ್
    	1880-. ಅಮೆರಿಕದ ಲೇಖಕಿ ಮತ್ತು ಅಂಧರ ಶಿಕ್ಷಕಿ. ಅಲಬಾಮದ ಟಸ್ಕುಂಬಿಯಲ್ಲಿ ಜನಿಸಿದಳು. ಒಂದೂವರೆ ವರ್ಷದ ಮಗುವಾಗಿದ್ದಾಗ ಮಿದುಳು ಜ್ವರದ ತೀವ್ರ ಕಾಯಿಲೆಯಿಂದ ಕಣ್ಣು ಕುರುಡಾಗಿ ಕಿವಿಗೇಳದಂತಾಗಿ ಮೂಕಳಾದಳು. ಹೆತ್ತವರ ಕೋರಿಕೆಯಂತೆ 7ನೆಯ ವರ್ಷದಲ್ಲಿ ಆನ ಮ್ಯಾನ್ಸ್‍ಫೀಲ್ಡ್ ಸಲ್ಲಿವನ್ ಎಂಬ ಉಪಾಧ್ಯಾಯಿನಿಯ ಕೈಕೆಳಗೆ ಈಕೆಯ ವಿದ್ಯಾಭ್ಯಾಸ ಪ್ರಾರಂಭವಾಯಿತು. ಅರೆ ಕುರುಡಾಗಿದ್ದು, ಕುರಡರ ಶಾಲೆಯಲ್ಲಿ ಪದವೀಧರೆಯಾಗಿದ್ದ 20 ವರ್ಷ ಪ್ರಾಯದ ಸಲ್ಲಿವನಳೊಂದಿಗೆ ವಾಸಿಸುತ್ತ ಕೆಲರ್ ಮೊದಲು ಕಿವುಡು ಮೂಕರ ಸನ್ನೆಗಳನ್ನು ಕಲಿತು ಅನಂತರ ಬ್ರೇಲ್ ಪದ್ಧತಿಯಲ್ಲಿ ಓದುವುದನ್ನೂ ವಿಶೇಷ ಬೆರಳಚ್ಚು ಯಂತ್ರದ ಸಹಾಯದಿಂದ ಬರೆವುದನ್ನೂ ಅಭ್ಯಾಸ ಮಾಡಿದಳು. ಆಮೇಲೆ ಮಾತಾಡುವುದನ್ನೂ ಕಲಿತಳು (1890). ಜೊತೆಗೆ ಬಾಸ್ಟನ್, ನ್ಯೂಯಾರ್ಕುಗಳ ಇನ್ನೆರಡು ಶಾಲೆಗಳ ಪಾಠಗಳಿಂದ ಸಾಮಾನ್ಯ ಪಠ್ಯಭಾಗಗಳಲ್ಲಿ ಪ್ರವೀಣೆ ಎನಿಸಿಕೊಂಡಳು. ಕಾಲೇಜು ಮೆಟ್ಟಲು ಹತ್ತಿ (1900) ನಾಲ್ಕೇ ವರ್ಷಗಳಲ್ಲಿ ರ್ಯಾಡ್‍ಕ್ಲಿಫ್ ಕಾಲೇಜಿನ ಶ್ರೇಷ್ಠ ಪದವೀಧರೆಯಾದಳು. ದುಡ್ಡಿನ ಮುಗ್ಗಟ್ಟು ತಪ್ಪಲಿಲ್ಲವಾಗಿ ತಾನು ಬದುಕಿ ಬಾಳಲೂ ತಾನು ಆರಿಸಿಕೊಂಡಿರುವ ಅಂಗವಿಕಲರ ಏಳಿಗೆಗೆ ಹಣ ಕೂಡಿಸಲೂ ಭಾಷಣ ಪ್ರವಾಸಗಳನ್ನು ಕೈಗೊಂಡಳು. ಪ್ರಪಂಚಾದ್ಯಂತ ಪ್ರವಾಸಮಾಡಿ ಅಂಧ ಮತ್ತು ಕಿವುಡರ ಬಗ್ಗೆ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿ ಜಗತ್ತಿನ ಪ್ರಶಂಸೆಗೆ ಪಾತ್ರಳಾದಳು. 1955ರಲ್ಲಿ ಈಕೆ ಭಾರತಕ್ಕೆ ಭೇಟಿ ನೀಡಿದ್ದಳು. ಗೋಲ್ಡ್ ಕೀ ಆಫ್ ದಿ ನ್ಯಾಷನಲ್ ಅಸೋಸಿಯೇಷನ್ ಪ್ರಶಸ್ತಿಯಲ್ಲದೆ (1938) ಹಲವಾರು ದೇಶಗಳ ಪ್ರಶಸ್ತಿಗಳೂ ಈಕೆಗೆ ಲಭ್ಯವಾದುವು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಾಪ್ತಿಯ ಅಮೆರಿಕನ್ ಫೌಂಡೇಷನ್ ಫಾರ್ ದಿ ಬ್ಲೈಂಡ್ ಸಂಸ್ಥೆಯ ಕೌನ್ಸಿಲರ್ ಆಗಿ ಈಕೆ ಕೆಲಸ ಮಾಡಿದ್ದಾಳೆ. ಹತ್ತು ದೊಡ್ಡ ಪುಸ್ತಕಗಳನ್ನೂ ಎಷ್ಟೋ ಲೇಖನಗಳನ್ನೂ ಬರೆದ ಕೆಲರ್, ಒಳ್ಳೆಯ ಬರೆಹಗಾರ್ತಿಯೆಂದು ಹೆಸರಾಗಿದ್ದಾಳಲ್ಲದೆ ತನ್ನ ಜೀವನದ ಹೋರಾಟವನ್ನವಲಂಬಿಸಿ ಚಲನಚಿತ್ರ ಒಂದನ್ನೂ ತಯಾರಿಸಿದ್ದಾಳೆ.

  ದಿ ಸ್ಟೋರಿ ಆಫ್ ಮೈ ಲೈಫ್ (1902), ಆಪ್ಟಿಮಿಸಮ (1903), ದಿ ವರ್ಲ್ಡ್ ಐ ಲಿವ್ ಇನ್ (1908), ಔಟ್ ಆಫ್ ದಿ ಡಾರ್ಕ್ (1913), ಮಿಡ್‍ಸ್ಟ್ರೀಮ್-ಮೈ ಲೇಟರ್ ಲೈಫ್ (1930), ಪೀಸ್ ಅಟ್ ಈವನ್‍ಟೈಡ್ (1932), ಲೆಟ್ ಅಸ್ ಹ್ಯಾವ್ ಫೇಯ್ತ್ (1940)-ಇವು ಈಕೆ ಬರೆದ ಪ್ರಮುಖ ಗ್ರಂಥಗಳು.				
	(ಡಿ.ಎಸ್.ಎಸ್.)